ಬುಧವಾರ, ಜುಲೈ 22, 2009

ಬಿಟಿ ಬದನೆ ತಿನ್ನಲು ನಾವು ಬಿಟ್ಟಿ ಬಿದ್ದಿದ್ದೆವೆಯೆ ?

ವಿಜಯಕರ್ನಾಟಕದಲ್ಲಿ ನಡೆದ ಕುಲಾಂತರಿ ತಳಿ ಬದನೆಯ ಬಗ್ಗೆ ಚರ್ಚೆಯಲ್ಲಿ ನನ್ನ ಲೇಖನ ಪ್ರಕಟವಾಗಿತ್ತು. ಅಡ್ಡಾದಿಡ್ಡಿ ಕತ್ತರಿ ಆಡಿಸಿ ಹೇಳಬೇಕೆಂದಿದ್ದ ವಿಷಯವನ್ನು ಜಾಳು ಮಾಡಲಾಗಿದೆ. ಸಂಪೂರ್ಣ ಲೇಖನ ಇಲ್ಲಿದೆ. ವಿಷಯದ ಬಗ್ಗೆ ಅರಿವಿಲ್ಲದಿರುವವನಿಗೆ ಎಲ್ಲಿ ಕತ್ತರಿ ಪ್ರಯೊಗಿಸಬೇಕೆಂಬುದೂ ಗೊತ್ತಾಗಿಲ್ಲ. ಆಹಾರ ಸಂಸ್ಕೃತಿ ನಾಶವಾಗುತ್ತಿದೆ, ನಮ್ಮ ಭೂಮಿಯ ಮೇಲೆ ಬಹುರಾಷ್ಟ್ರೀಯ ಕಂಪನಿಗಳ ಹಿಡಿತ ಬಿಗಿಯಾಗುತ್ತಿದೆ, ನಾವು ಮತ್ತೆ ಗುಲಾಮಗಿರಿಯತ್ತ ತೆರಳುತ್ತಿದ್ದೇವೆ ಎಂದು ನಾವು ಬಡಕೊಳ್ಳುತ್ತಿದ್ದರೆ ಸಲಿಂಗ ಕಾಮಿಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಪ್ರಿತಿಶ್ ನಂದಿಯಂತವರು ಸವಿತಾಭಾಭಿಯ ಬಗ್ಗೆ ಪುಟಗಟ್ಟಲೆ ಬರೆಯುತ್ತಾರೆ. ಕುಲಾಂತರಿ ತಳಿಗಳ ಘೋರ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ, ಕೋಟ್ಯಂತರ ಎಕರೆಗಳಲ್ಲಿ ತಳಿಗಳ ಪ್ರಯೋಗಕ್ಕೆ ಅವಕಾಶ ಕೊಟ್ಟಿರುವ ಬಗ್ಗೆ ಎಲ್ಲೂ ಸೊಲ್ಲೇ ಕಾಣುತ್ತಿಲ್ಲ. ನಮ್ಮ ದೇಶವನ್ನು ಸುಡುತ್ತಿರುವ ಸಮಸ್ಯೆಗಳಾವವು ಎಂಬುದರ ಬಗ್ಗೆ ಕನಿಷ್ಟ ಪ್ರಜ್ಞೆ ಇಲ್ಲದ ಮಾಧ್ಯಮಗಳಿಗೆ ಧಿಕ್ಕಾರವಿರಲಿ.

ಡಾ.ಶಾಂತಾರಾಂ ರವರು ಬಿ.ಟಿ ಬದನೆಯ ವಿರೋಧಿಗಳ ಮೇಲೆ ಕಿಡಿಕಾರಿದ್ದಾರೆ. ಆದರೆ ವಿರೋಧಿಗಳು ವಿರೋಧಿಸುತ್ತಿರುವ ತಳಹದಿ ಯಾವುದು ಮತ್ತು ಆ ವಿರೋಧಗಳು ಯಾಕೆ ಸಲ್ಲದು ಹಾಗೂ ವಿರೋಧಗಳು ಏಕೆ ಅವೈಜ್ಞಾನಿಕ ಎಂದು ಹೇಳಿಲ್ಲ. ತಮ್ಮ ಲೇಖನಕ್ಕೆ ವೈಜ್ಞಾನಿಕ ಆಧಾರಗಳಿವೆ ಎನ್ನುತ್ತಾರಾದರೂ ಆ ಆಧಾರಗಳೇನು ಎಂದು ಹೇಳಿರುವುದಿಲ್ಲ. ಬಿ.ಟಿ ತಳಿಯ ಬೆಳೆಗಳು ಅದರಲ್ಲೂ ಲೇಖಕರು ವಿಮರ್ಶಿಸಿರುವ ಬದನೆಯ ಬಗ್ಗೆ ಸಾಕಷ್ಟು ಅಪಸ್ವರಗಳಿವೆ. ಬಿ.ಟಿ ತಳಿಗೆ ಮರುದನಿಗಳನ್ನು ಕೇವಲ ರೈತ ಮುಖಂಡರಲ್ಲದೇ ಅನೇಕ ಪ್ರಸಿದ್ಧ ವಿಜ್ಞಾನಿಗಳೂ ಎತ್ತಿದ್ದಾರೆ. ಭಾರತದಲ್ಲಿ ಬಿಡುಗಡೆ ಮಾಡಲು ಇಚ್ಚಿಸಲಾದ ಮನ್ಸಾಂಟೋ ಮತ್ತು ಮಹಿಕೊ ಕಂಪನಿಗಳ ತಳಿಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ.

ಫ಼್ರೆಂಚ್ ವಿಜ್ಞಾನಿ ಡಾ.ಸೆರಾಲಿನಿ ಭಾರತದಲ್ಲಿ ಮೇಲೆ ಹೇಳಿದ ಕಂಪನಿಗಳು ಬಿಡುಗಡೆ ಮಾಡಲಿರುವ ಬದನೆಯ ಬಗ್ಗೆ ಸಂಶೊಧನೆ ನಡೆಸಿ ಕೆಲ ಆತಂಕಕಾರಿ ಫ಼ಲಿತಾಂಶಗಳನ್ನು ಹೊರಗೆಡಹಿದ್ದಾರೆ. ಅವರು ತಮ್ಮ ಪ್ರಯೋಗಾಲಯದಲ್ಲಿ ಕಂಡುಕೊಂಡ ಕೆಲ ಅಂಶಗಳು ಹೀಗಿವೆ.
೧. ಬಿಟಿ ಬದನೆಯು ತರಕಾರಿಗಳ ಜೀವಕೋಶಗಳಲ್ಲಿ ಒಂದು ರೀತಿಯ ಪ್ರೋಟೀನನ್ನು ಉತ್ಪಾದಿಸುತ್ತದೆ. ಈ ಪ್ರೋಟೀನ್ ಆಂಟಿಬಯಾಟಿಕ್‍ಗಳ ವಿರುದ್ಧ ದೇಹದಲ್ಲಿ ನಿರೋಧಕತೆಯನ್ನು ಹೆಚ್ಚಿಸುತ್ತದೆ.
೨. ಬಿಟಿ ಬದನೆಯಲ್ಲಿ ಸಹಜ ಬದನೆಗಳಿಗಿಂತ ಶೇ.ಹದಿನೈದರಷ್ಟು ಕಡಿಮೆ ಕ್ಯಾಲೋರಿಗಳಿವೆ ಅಲ್ಲದೇ ಮಾಮೂಲು ಬದನೆಯಲ್ಲಿರುವ ಮತ್ತು ಬಿಟಿ ಬದನೆಯಲ್ಲಿರುವ ಆಲ್ಕಲೈಡುಗಳು ವಿಭಿನ್ನವಾಗಿವೆ. ಬಿಟಿ ಬದನೆಯಲ್ಲಿ ಕೆ.ಜಿ.ಗೆ ಹದಿನೈದರಿಂದ ಹದಿನಾರು ಮಿಲಿಗ್ರಾಂಗಳಷ್ಟು ಕೀಟನಿರೋಧಕ ವಿಷವಿದೆ. ಇದು ಪ್ರಾಣಿಗಳ ರಕ್ತ ಪರಿಚಲನೆ ಮತ್ತು ವಂಶಾಭಿವೃದ್ಧಿಯ ಸರಪಳಿಗಳಲ್ಲಿ ವ್ಯತ್ಯಯವನ್ನು ತರಲಿದೆ. ಕುರಿ ಮತ್ತು ಮೊಲಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಅವುಗಳ ರಕ್ತ ಹೆಪ್ಪುಗಟ್ಟುವ ಅವಧಿಯಲ್ಲಿ ಮತ್ತು ಯಕೃತ್ತಿನ ಆರೋಗ್ಯದಲ್ಲಿ ವ್ಯತ್ಯಯವುಂಟಾಗಿದ್ದು ಕಂಡುಬಂದಿದೆ.
೩. ಪ್ರಯೋಗದಲ್ಲಿ ಬಿಟಿ ಬದನೆಯ ಆಹಾರ ಸೇವಿಸಿದ ಇಲಿಗಳಲ್ಲಿ ಡಯೇರಿಯಾ, ಹೆಚ್ಚಿದ ನೀರಿನ ಸೇವನೆ, ಯಕೃತ್ತಿನ ತೂಕ ಕಳೆದುಕೊಳ್ಳುವಿಕೆ ಹಾಗೂ ದೇಹ ಮತ್ತು ಯಕೃತ್ತಿನ ತೂಕದ ಅನುಪಾತದಲ್ಲಿ ವ್ಯತ್ಯಾಸವಾಗಿದ್ದು ಕಂಡುಬಂದಿದೆ.
೪. ಹಾಲು ಕರೆಯುವ ಆಕಳುಗಳಲ್ಲಿ ತೂಕ ಹೆಚ್ಚಾದದ್ದು, ಅತಿಯಾದ ಆಹಾರ ಸೇವನೆ, ಹಾಲಿನ ಉತ್ಪಾದನೆ ಶೇ. ಹತ್ತರಿಂದ ಹದಿನೈದರಷ್ಟು ಹಾಲು ಉತ್ಪಾದನೆ ಹೆಚ್ಚಾದದ್ದು ಕಂಡುಬಂದಿದೆ. ಈ ರೀತಿಯ ಬದಲಾವಣೆಗಳು ಕಂಡುಬರುವುದು ಹಾರ್ಮೋನ್‍ಗಳಲ್ಲಿ ವ್ಯತ್ಯಾಸವುಂಟಾದಾಗ ಮಾತ್ರ!
೫. ನೇರ ಪ್ರಯೋಗಗಳಿಗೆ ಒಳಪಡದ ಆದರೆ ಪ್ರಯೋಗಕ್ಕೆ ಒಳಪಟ್ಟ ಜೀವಿಗಳನ್ನು ಅವಲಂಬಿಸಿರುವ ಪ್ರಾಣಿಗಳ ಮೇಲೆ ಆಗಬಹುದಾದ ಪರಿಣಾಮಗಳ ಅಧ್ಯಯನ ನಡೆಸಲಾಗಿಲ್ಲ. ಇಷ್ಟೊಂದು ಜೀವ ವೈವಿಧ್ಯವಿರುವ ಕಡೆ ಕೆಲವೇ ಜೀವಿಗಳ ಅಥವಾ ಕೀಟಗಳ ಮೇಲೆ ಅಧ್ಯಯನ ನಡೆಸಿ ಬಿಟಿ ಹತ್ತಿಯ ಪ್ರಯೋಗಕ್ಕೆ ಅನುಮತಿ ಕೊಟ್ಟಿರುವುದು ಅವೈಜ್ಞಾನಿಕ ಹಾಗೂ ಮೂರ್ಖತನ.

ಇವೆಲ್ಲರ ಜೊತೆಗೆ ಡಾ.ಸೆರಾಲಿನಿಯವರು ಪತಂಗ ಮತ್ತು ಪರಾಗಸ್ಪರ್ಷ ಹುಳುಗಳ ಮೇಲೆ ಬಿಟಿ ಬದನೆಯಿಂದಾಗಬಹುದಾದ ಪರಿಣಾಮಗಳ ಬಗ್ಗೆ ಸರಿಯಾದ ಸಂಶೋಧನೆ ನಡೆಯದಿರುವುದರ ಕಡೆ ಬೊಟ್ಟು ಮಾಡುತ್ತಾರೆ. ಭಾರತದಂತಹ ಜೀವವೈವಿಧ್ಯತೆಯಿರುವ ದೇಶದಲ್ಲಿ ಕೆಲವೇ ಕೆಲವು ಪ್ರಬೇಧಗಳ ಮೇಲೆ ಸಂಶೊಧನೆ ನಡೆಸಿ ಬಿಟಿ ಬದನೆಯನ್ನು ಬಿಡುಗಡೆ ಮಾಡಲಾಗುತ್ತಿರುವುದನ್ನು ಅವರು ವಿರೋಧಿಸುತ್ತಾರೆ. ಎಂಬ ಬ್ಯಾಕ್ಟೀರಿಯಾದಿಂದ ಬದನೆಯಲ್ಲಿ ಉತ್ಪಾದನೆಯಾಗುವ ಕೀಟ ನಿರೋಧಕಗಳು ಮಾನವನ ಸೇವನೆಗೆ ಅರ್ಹವೆಂದು ಸಾಬೀತಾಗಿಲ್ಲ. ಮೇಲೆ ನಡೆಸಿದ ಪ್ರಯೋಗಗಳೆಲ್ಲವೂ ಕಿರುಗಾಲದ(ಸುಮಾರು ೯೦ ದಿನಗಳು) ಅಧ್ಯಯನವಾಗಿದ್ದು ದೂರಗಾಮಿ ಪರಿಣಾಮಗಳ ಬಗ್ಗೆ ತಿಳಿಸುವುದಿಲ್ಲ. ದೂರಗಾಮಿ ಪರಿಣಾಮಗಳ ಬಗ್ಗೆ ವಿಶೇಷ ಅಧ್ಯಯನವೂ ನಡೆದಿಲ್ಲ.

ಇನ್ನು ಜಿ.ಇ.ಎ.ಸಿ ನೀಡಿದ ವರದಿಯಲ್ಲಿರುವ ಅನೇಕ ಅನುಮಾನಾಸ್ಪದ ಅಂಶಗಳಿವೆ.
೧. ತಳಿಗಳ ಅಧ್ಯಯನಕ್ಕಾಗಿ ಆಧಾರವಾಗಿ (ರೆಫ಼ರೆನ್ಸ್) ಕೊಡಲಾದ ಸಾಹಿತ್ಯದ ಹಿನ್ನೆಲೆಯನ್ನು ಮತ್ತು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗಿಲ್ಲ.
೨. ಪ್ರಯೋಗಾಲಯದಲ್ಲಿ ನಡೆಸಲಾದ ಬಹುತೇಕ ಪ್ರಯೋಗಗಳಿಗೆ ಸಂಶೊಧನೆ ನಡೆಸಿದ ಸಂಶೊಧಕರು ಸಹಿ ಹಾಕಿಲ್ಲ. ಸಹಿ ಇರಬೇಕಾದ ಜಾಗೆಗಳು ಖಾಲಿ ಇವೆ.
3. ಜೆನೆಟಿಕಲ್ ಇಂಜಿನಿಯರಿಂಗ್ ಅಪ್ರೂವಲ್ ಕಮಿಟಿಯು ತಮ್ಮ ಸಂಶೊಧನೆಯ ಅಂಗವಾಗಿ ವೈದ್ಯರ ಬಳಗದ ಮತ್ತು ಪಶುವೈದ್ಯರ ಬಳಗದ ಸಲಹೆಯನ್ನು ತೆಗೆದುಕೊಂಡಿಲ್ಲ. ವಿವಿಧ ವೈದ್ಯಕೀಯ ವಿಭಾಗಗಳ ಸಲಹೆಯನು ಪರಿಗಣಿಸದೇ ವರದಿ ನೀಡಿರುವುದು ಅತ್ಯಂತ ಅವೈಜ್ಞಾನಿಕ.
4. ಹೊಸ ಜೀನನ್ನು ಬದನೆಯಲ್ಲಿ ಹೇಗೆ ಸೇರಿಸಲಾಯಿತು ಎಂಬುದನ್ನು ವರದಿಯಲ್ಲಾಗಲೀ ಆಧಾರ ಸಾಹಿತ್ಯದಲ್ಲಾಗಲೀ ಎಲ್ಲೂ ಹೇಳಿಲ್ಲ. ಕುಲಾಂತರಿಸಲು ಪ್ರಯೋಗಿಸಲಾದ ಜೀನ್ ಸ್ಥಿರವಾದದ್ದೇ ಎಂದು ವಿವರಿಸಲಾಗಿಲ್ಲ. ಸ್ಥಿರತೆಯನ್ನು ದೃಢಪಡಿಸಲು ಯಾವುದೇ ಪ್ರಯೋಗಗಳನ್ನು ಕೈಗೊಂಡಿಲ್ಲ.

"ಬಿಟಿ ತಳಿಯ ಹತ್ತಿ ಮತ್ತು ಬದನೆ ಎರಡನ್ನೂ ಭಾರತದಲ್ಲಿ ನಿಷೇಧಿಸಬೇಕೆಂದು ಜೆಫ಼ರಿ ಸ್ಮಿತ್ ಹೇಳಿದ್ದಾರೆ. ಜೆಫ಼ರಿ ಸ್ಮಿತ್ ಇನ್ಸ್‍ಟಿಟ್ಯುಟ್ ಫ಼ಾರ್ ರೆಸ್ಪಾನ್ಸಿಬಲ್ ಟೆಕ್ನಾಲಾಜಿಯ ನಿರ್ದೇಶಕರು ಹಾಗೂ ಕುಲಾಂತರಿ ತಳಿಗಳ ಸಂಶೋಧನೆಯಲ್ಲಿ ವಿಶೇಷ ಪರಿಣಿತಿ ಪಡೆದಿರುವವರು. ಈ ವಿಷಯವಾಗಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಪುಸ್ತಕಗಳನ್ನು ರಚಿಸಿದ್ದಾರೆ. "ಯಾವುದೇ ದೇಶದ ಮೂಲತಳಿ ಕುಲಾಂತರಿಸಲಾದ ತಳಿಯೊಂದಿಗೆ ಹೊಂದಿಕೊಂಡು ಬೆಳೆದ ಉದಾಹರಣೆಗಳಿಲ್ಲ" ಎಂದು ಅವರು ಹೇಳುತ್ತಾರೆ. ಇತ್ತೀಚೆಗೆ ಇವರ ಮಾರ್ಗದರ್ಶನದಲ್ಲಿ ಚಂಡೀಗಡದಲ್ಲಿ "ನಾವು ಪ್ರಯೋಗದ ಇಲಿಗಳಲ್ಲ" ಎಂಬ ಘೋಷಣೆಯುಳ್ಳ ಚಳುವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಚಳುವಳಿ ಬಿಟಿ ತಳಿ ಅದರಲ್ಲೂ ಬದನೆ ತಳಿಯನ್ನು ಭಾರತೀಯ ಹೊಲಗಳಲ್ಲಿ ಪರಿಚಯಿಸುವುದನ್ನು ವಿರೋಧಿಸಿತ್ತು.
ಇದರೊಡನೆ ಇನ್ನೂ ಅನೇಕ ಆರೋಪಗಳು ಬಿಟಿ ಹತ್ತಿಯ ಮೇಲೆ ಇವೆ. ಬಿಟಿ ಬದನೆಗೂ ಸಾಮಾನ್ಯ ಬದನೆಗೂ ವ್ಯತ್ಯಾಸವಿಲ್ಲ ಎಂಬ ಹೇಳಿಕೆಗೆ ಯಾವುದೇ ಪ್ರಯೋಗಾಧಾರಿತ ಹಿನ್ನೆಲೆಯಿಲ್ಲ. ಬಿಟಿ ಬದನೆಯಿಂದ ಪರಾಗ ಸ್ಪರ್ಷ ಹೊಂದಿದ ದೇಶೀಯ ಬದನೆ ಗಿಡಗಳ ಮೇಲೆ ಯಾವ ಪರಿಣಾಮಗಳುಂಟಾಗುತ್ತವೆ ಎಂಬುದರ ಬಗ್ಗೆ ವಿಸ್ತೃತ ಮಾಹಿತಿ ಇಲ್ಲ. ದೇಶೀ ತಳಿಗಳೆಲ್ಲಾ ಬಿಟಿ ತಳಿಯಿಂದ ಕಲುಷಿತಗೊಂಡರೆ ಮೂಲ ತಳಿಗಳು ಮತ್ತು ಅದರ ರುಚಿ ನಾಶವಾಗಿ ಹೋಗುತ್ತದೆ. ಕಾಲಾನಂತರ ಜ್ಞಾನೋದಯವಾಗಿ ತಿರುಗಿ ಪಡೆಯಬೇಕೆಂದರೂ ಮತ್ತೆ ಸಿಗುವುದಿಲ್ಲ. ಬದನೆ ಭಾರತದ ಜನಪ್ರೀಯ ಆಹಾರ ಹಾಗೂ ಇದನ್ನು ಔಷಧಿಯಾಗಿಯೂ ಬಳಸಲ್ಪಡುತ್ತದೆ. ಈ ಮೂಲ ಔಷಧೀಯ ಗುಣಗಳು ಮತ್ತು ರುಚಿ ಹೊಸ ಬದನೆಯಲ್ಲಿ ಕಂಡುಬರುತ್ತದೆಯೇ ಎಂಬುದಕ್ಕೆ ಉತ್ತರ ಕೊಟ್ಟಿಲ್ಲ. ಬಿಟಿ ಬದನೆಯು ಮನುಷ್ಯರಲ್ಲಿ ಅಲರ್ಜಿ ಮತ್ತು ಮತ್ತು ಬಿಟಿ ಬದನೆ ಸೇವಿಸುವ ಕುರಿ ಸಾಕಾಣಿಕೆ ಕೇಂದ್ರಗಳಲ್ಲಿನ ಕುರಿಗಳಿಗೆ ಸಾವು ತಂದಿರುವ ಸಾಕಷ್ಟು ಉದಾಹರಣೆಗಳಿವೆ.

ಬಿಟಿ ಬದನೆಯ ಬಳಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಮಾಜಿ ಕೇಂದ್ರ ಆರೋಗ್ಯ ಸಚಿವ ಡಾ. ಅನ್ಬುಮಣಿ ರಾಮದಾಸ್ ಬಿಟಿ ತಳಿಯ ಸುರಕ್ಷತೆಯ ಸರಿಯಾದ ಸಂಶೊಧನೆಗಳಿಲ್ಲದೆ ದೇಶದಲ್ಲಿ ಬಿಡುಗಡೆ ಮಾಡುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದ್ದರು. ದೇಶದಲ್ಲಿ ವೈವಿಧ್ಯಮಯ ತಳಿಯ ಬದನೆಗಳಿರುವಾಗ ಬೇರೆ ದೇಶದಿಂಡ ತಳಿಯೊಂದನ್ನು ಆಮದು ಮಾಡಿಕೊಂಡು ಬೆಳೆಯುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ್ದರು.

ಇವು ತಾಂತ್ರಿಕ ಮಾಹಿತಿಗಳು. ಈ ಮೇಲಿನ ಪ್ರಶ್ನೆಗಳಿಗೆ ಅಥವಾ ಆಕ್ಷೇಪಗಳಿಗೆ ಯಾವ ಬಿಟಿ ಪರ ಸಂಶೊಧಕರಾಗಲೀ, ವ್ಯಾಪಾರಿಯಾಗಲೀ ಉತ್ತರ ನೀಡಿಲ್ಲ. ಭಾರತದಲ್ಲಿ ಬಿಟಿ ಬದನೆಯನ್ನು ಹೇರುವುದು ಅಂತಾರ್ರಾಷ್ಟ್ರೀಯ ಹುನ್ನಾರದ ಒಂದು ಭಾಗವಷ್ಟೆ! ಕೃತಕ ತಳಿಯ ಮೂಲಕ ನೈಸರ್ಗಿಕ ಜೀವ ವೈವಿಧ್ಯಕ್ಕೆ ಸಂಚುತರುವ ಅನೈತಿಕತೆಯ ಬಗ್ಗೆ ಮತ್ತು ಪೇಟೆಂಟ್‍ಗಳ ಮೂಲಕ ಭಾರತದ ಬೇಸಾಯ ಪದ್ಧತಿಯನ್ನು ಅಧೋಗತಿಗೆ ಒಯ್ಯುತ್ತಿರುವ ಷಡ್ಯಂತ್ರದ ಬಗ್ಗೆ ಈ ಹಿಂದಿನ ಲೇಖನಗಳಲ್ಲಿ ಅನೇಕ ಹಿರಿಯರು ಚರ್ಚಿಸಿದ್ದಾರೆ. ನಮ್ಮ ದೇಶದಲ್ಲಿ ಕೃಷಿ ಮತ್ತು ಆಹಾರ ಸಂಸ್ಕೃತಿ ಉಳಿಯಬೇಕೆಂದರೆ ಬಿಟಿ ಬದನೆ ಮಾತ್ರವಲ್ಲ ಕುಲಾಂತರಿ ತಳಿಯ ಎಲ್ಲಾ ಬೆಳೆಗಳನ್ನು ನಿಷೇಧಿಸಬೇಕು.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಶ್ರೀಹರ್ಷ,

ಸಕ್ಕತ್ ಲೇಖನ.

ಚಿತ್ರ