ಗುರುವಾರ, ಏಪ್ರಿಲ್ 23, 2009

ಲಸಿಕೋಪಾಖ್ಯಾನ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಷಡ್ಯಂತ್ರ

"ಎನೂ ಕಾಳಜಿ ಮಾಡಬ್ಯಾಡಣ್ಣಾ! ನೀ ಹೇಳೂದು ಖರೆ ಅದ. ವ್ಯಾಕ್ಸಿನ್ ಇಲ್ಲದಂಗ ಮನಿಶ್ಯಾ ಅಗ್ದಿ ಛೊಲೊ ಬದುಕತಾನ. ಎಮ್ಮೆನ್ಸಿಗಳು ಎಲ್ಲಾ ಪಿತ್ತೊರಿ ನಡಿಸಿ ಹಿಂಗ ಬೇಕಬೇಕಾದಂಗ ಔಷಧಿ ಚುಚ್ಚತಾವು. ರೇಬಿಸ್ ವ್ಯಾಕ್ಸಿನ್ ಸೆರೆಬ್ರಲ್ ಎಡಿಮಾ ತಂದು ಇಡತತಿ. ಬೇರೆಯೊರ ಹತ್ರ ರೇಬಿಸ್ ವ್ಯಾಕ್ಸಿನ್ ಹಾಕಿಸ್ಕೆಂಡ ಮೂರು ಮಂದಿ ಒಳಗ ಇಬ್ರಿಗೆ ಸೆರೆಬ್ರಲ್ ಎಡಿಮಾ ಹತ್ತಿದ್ದು ನಾನ ಟ್ರೀಟ್ ಮಾಡೆನಿ. ಮೆಡಿಕಲ್ ರೆಫ಼ರೆನ್ಸ್ ನೆಗೂ ರೇಬೀಸ್ ಸೈಡ್ ಎಫ಼ೆಕ್ಟ್ ಸೆರೆಬ್ರಲ್ ಎಡಿಮಾ ಅಂತ ಅದ. ಎಲ್ಲಾ ನಾಯಿ ಕಚ್ಚಿದ ಕೂಡ್ಲೆಗೆ ವ್ಯಾಕ್ಸಿನ್ ಹಾಕಿಸ್ಕೊಬೇಕಿಲ್ಲ . ನಾಯಿ ಕಂಡಿಶನ್ ನೋಡ್ಬೇಕಾಗ್ತದ. ಪೂರ್ತಿ ಇನ್ಫ಼ೆಕ್ಟೆಡ್ ಅಂತ ಖಾತ್ರಿ ಅದ ಮ್ಯಾಲೆ ವ್ಯಾಕ್ಸಿನ್ ಹಾಕ್ಬಕು. ಆದ್ರು ಸೆರೆಬ್ರಲ್ ಎಡಿಮಾದ ರಿಸ್ಕ್ ಎದ್ದ ಇರ್ತದ. ಮಂದಿಗೆ ಇದು ಗೊತ್ತಿಲ್ಲ. ಯಾವ ನಾಯಿ ಕಚ್ಚಿದ್ರೂ ವ್ಯಾಕ್ಸಿನ್ ಹಾಕಿಸ್ಕೊತಾರ. ಸ್ಟ್ಯಾಟಿಸ್ಟಿಕ್ಸ್ ಹಿಡಕೊಂಡು ನೀ ಬರಿ ಮೆಡಿಕಲ್ ಟೆಕ್ನಿಕಲ್ ವಿಶ್ಯ ನಿಂಗ ಗೊತ್ತಾಗ್ಲಿಕ್ಕಿಲ್ಲ. ನಾ ಅದನ್ನ ಹೇಳಿಕೊಡ್ತೇನಿ" ಎಂದಳು ಚೇತೂ.
" ನೀ ನನ್ನ ಜೋಡಿ ಕೈ ಹಚ್ಚಿದ್ದು ಚದುರಂಗ ಬಲ ಬಂದಂಗಾತು ನೋಡಬೆ. ಖರೆ ಹೇಳಿದ್ರೂ ಜನಾ ಕೇಳಕ ವಲ್ರು. ಡಾಕ್ಟ್ರುಗಳು ಹೇಳಿದ್ರು ಅಂದ ಕೂಡ್ಲೆ ಹಿಂದ ಮುಂದ ನೊಡದಂಗ ನಂಬಿಬಿಡ್ತಾರ. ನೂರು ಸರಿ ಹೇಳಿದ ಸುಳ್ಳು ಹೆಂಗ ಸತ್ಯಾನ ಆಗಿಬಿಡ್ತತಲ್ಲ ಅಂತ ಬ್ಯಾಸರ ಅಷ್ಟ. ಇದರ ಬಗ್ಗೆ ಇಂಟರ್‌ನೆಟ್‍ನೆಗೂ ಮಾಹಿತಿ ಸಿಗದಂಗ ಕಾಳಜಿ ತಗೊಂಡಿರ್ತಾರ ಕಂಪನಿಯೊರು!".
ಚೇತನಾ ವೃತ್ತಿಯಿಂದ ವೈದ್ಯೆ. ವರಸೆಯಲ್ಲಿ ನನಗೆ ತಂಗಿಯಾಗಬೇಕು. ಹಳ್ಳಿಗಳಲ್ಲಿ ಉಚಿತ ವೈದ್ಯಕೀಯ ಕ್ಯಾಂಪ್‍ಗಳನ್ನು ನಡೆಸುವ ಸ್ವಯಂಸೇವಾ ಸಂಸ್ಥೆಯೊಂದರ ನಿಕಟವರ್ತಿ! ನಾನು ಲಸಿಕೆಗಳ ಬಗ್ಗೆ ಸಂಗ್ರಹಿಸಿದ ಮಾಹಿತಿಯನ್ನು ಕಂಡು ಮೆಚ್ಚಿದ್ದಳು. ಡಾ.ಕಕ್ಕಿಲಾಯರವರು ಪೋಲಿಯೊ, ನಾಯಿಕೆಮ್ಮು, ಡಿಫ್ಟಿರಿಯ ಧನುರ್ವಾಯುಗಳನ್ನು ಹೊರತುಪಡಿಸಿ ಉಳಿದ ಲಸಿಕೆ ಹಾಕಿಸುವುದು ಸಾಧುವಾಗಲಿಕ್ಕಿಲ್ಲವೆಂದು ಅಭಿಪ್ರಾಯ ಪಡುತ್ತಾರೆ. ಈ ಮೂಲಕ ಚೇತೂ ಬಿಟ್ಟರೆ ನಾನು ನಂಬಿಕೆ ಇಡಬಲ್ಲ ವೈದ್ಯರು ಡಾ.ಕಕ್ಕಿಲಾಯರವರು ಎಂದು ಹೇಳಬಲ್ಲೆ. ಪೋಲಿಯೋ ಲಸಿಕೆ ಹಾಕಿಸುವ ಅವಶ್ಯಕತೆ ಯಾಕೆ ಇಲ್ಲ ಎಂದು ನಾನು ನನ್ನ ಹಿಂದಿನ ಲೇಖನಗಳಲ್ಲಿ ಹೇಳಿದ್ದೇನೆ.

ಲಸಿಕೆಗಳು ಮನುಷ್ಯನ ಆರೋಗ್ಯಪೂರ್ಣ ಬದುಕಿಗೆ ಪ್ರಚಾರವಿದ್ದಷ್ಟು ಪೂರಕವಲ್ಲ ಎಂದು ಪ್ರತಿಪಾದಿಸಿದ್ದೇನೆ. ರೋಗಕ್ಕೆ ಮೂಲ ಕಾರಣ ರೋಗಾಣುಗಳಲ್ಲ. ಬದಲಾಗಿ ’ಟಾಕ್ಸೇಮಿಯಾ’ ದಿಂದ ಉಂಟಾಗುತ್ತದೆ. ಟಾಕ್ಸೇಮಿಯಾ ಅಂದರೆ ದೇಹದಲ್ಲಿ ವಿಷ ಉರವಣಿಸಿದ ಸ್ಥಿತಿ. ಈ ಟಾಕ್ಸೇಮಿಯಾದಿಂದಾಗಿ ರೋಗನಿರೋಧಕತೆ ಕಡಿಮೆಯಾಗಿ ಜೀವಕೊಶಗಳಿಗೆ ಹಾನಿಯಾಗಿ ರೋಗಾಣುಗಳ ಬೆಳವಣಿಗೆಗೆ ಸಹಾಯವಾಗುತ್ತದೆ. ಮಕ್ಕಳಲ್ಲಿ ಟಾಕ್ಸೇಮಿಯಾ ಉಂಟಾಗುವುದಕ್ಕೆ ಬಹುಮುಖ್ಯ ಕಾರಣ ಪೌಷ್ಟಿಕ ಆಹಾರದ ಕೊರತೆ ಮತ್ತು ಶುಚಿತ್ವದ ಕೊರತೆ! ಲಸಿಕೆಗಳ ಕೆಲಸವೆಂದರೆ ದೇಹದ ರೋಗನಿರೊಧಕತೆಯನ್ನು ರೋಗಾಣುಗಳ ವಿರುದ್ಧ ಪ್ರಚೊದಿಸುವುದು. ಅಪೌಷ್ಟಿಕತೆಯಿಂದಾಗಿ ದೇಹದಲ್ಲಿ ವಿಷ ಸೇರಿರುವ ಮಕ್ಕಳಿಗೆ ಯಾವ ಲಸಿಕೆ ಹಾಕಿದರೂ ಪ್ರಯೋಜನವಾಗದು ಎಂದು ಅಮೇರಿಕಾದ ಖ್ಯಾತ ವೈದ್ಯ ಹೆನ್ರಿ ಬೀಲರ್ ತಮ್ಮ " Food is your best Medicine" ಪುಸ್ತಕದಲ್ಲಿ ಹೇಳುತ್ತಾರೆ.
ಲಸಿಕೆಗಳ ಉಪಯುಕ್ತತೆಯ ಅಂಕಿಅಂಶಗಳ ಬಗ್ಗೆ ಎಲ್ಲರೂ ಹೇಳುವ ಜಾಣ ಸುಳ್ಳು ಎಂದರೆ ತಮಗೆ ಬೇಕಾದ ಇಸವಿಯಿಂದ ಆ ಅಂಕಿಅಂಶಗಳನ್ನು ತೆಗೆದುಕೊಳ್ಳುವುದು. ದಡಾರ, ಪೊಲಿಯೊ ಇತ್ಯಾದಿ ರೋಗಗಳು ಕಡಿಮೆಯಾದದ್ದನ್ನು ಐವತ್ತರ ದಶಕದ ನಂತರದ ಅಂಕಿಅಂಶಗಳ ಮೂಲಕ ತೋರಿಸುತ್ತಾರೆ. ಇದೇ ಅಂಕಿಅಂಶಗಳನ್ನು ೧೯೦೦ ರಿಂದ ತೆಗೆದುಕೊಂಡರೆ ಐವತ್ತರ ದಶಕದ ವೇಳೆಗೆ ದಡಾರ, ಪೊಲಿಯೊ, ಟೈಫ಼ಾಯಿಡ್, ಸ್ಕಾರ್ಲೆಟ್ ಜ್ವರ, ಟಿ.ಬಿ, ಪೊಲಿಯೊ, ನಾಯಿಕೆಮ್ಮು ರೋಗಗಳು ಸಾಕಷ್ಟು ಕಡಿಮೆಯಾಗಿದ್ದವು. [೧],[೨][೩]. ಅಂಕಿ ಅಂಶಗಳನ್ನು ಎಲ್ಲೊ ಮಧ್ಯಭಾಗದಿಂದ ನೋಡದೇ ಶತಮಾನದ ಪ್ರಾರಂಭದ ಅಂಚಿನಿಂದ ಅಥವಾ ಹಿಂದಿನ ಶತಮಾನದಿಂದ ನೋಡುವುದು ಸರಿಯಾದ ಮಾರ್ಗ. ಲಸಿಕೆ ಬರುವುದಕ್ಕಿಂತ ಮುಂಚೆಯೆ ರೋಗಿಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಲಸಿಕೆಗಳು ರೋಗಗಳನ್ನು ನಿಯಂತ್ರಣ ಮಾಡಿದವು ಎಂಬುದೆ ಪ್ರಶ್ನಾರ್ಹ.
ಡಾ. ಬಾರ್ಟ್ ಕ್ಲಾಸ್ಸನ್ ರವರು ಇನ್ನೊಂದು ಸಂಶೊಧನೆಯನ್ನು ಮಾಡಿದ್ದಾರೆ.ನಮ್ಮ ದೇಹದೊಳಗೆ ಬೇರೆ ಡಿ.ಎನ್.ಎ ಅಥವಾ ಆರ್.ಎನ್.ಎ ಗಳನ್ನು ಕೃತಕವಾಗಿ ಚುಚ್ಚಿದರೆ ಪರಿಣಾಮಗಳೇನಾಗಬಹುದುದು ಎಂಬುದು ಅವರ ಸಂಶೋಧನೆಯ ವಿಷಯ. ಅವರ ಈ ಸಂಶೋಧನೆಯ ಪ್ರಕಾರ ಲಸಿಕೆಗಳಿಗೂ ಡಯಾಬಿಟಿಸ್ ಗೂ ನೇರ ಸಂಬಂಧವಿದೆ. ಮೊದಲು ಪ್ರಾಣಿಗಳ ಮೇಲೆ ನಡೆಸಿದ ಸಂಶೊಧನೆಯನ್ನು ಮನುಷ್ಯರ ಮೇಲೆಯೂ ವಿಸ್ತರಿಸಿದರು. ದಡಾರದ(measles) ವೈರಸ್ ನ ಆಂಟಿಜೆನಿಕ್ ವಿನ್ಯಾಸ ನಮ್ಮ ಮೇದೊಜೀರಕಾಂಗದ ಜೀವಕೊಶಗಳ(ಬೀಟಾ ಸೆಲ್ಸ್) ಆಂಟಿಜೆನಿಕ್ ವಿನ್ಯಾಸದಂತೆಯೇ ಇದೆ. ನಮ್ಮ ದೇಹಕ್ಕೆ ಲಸಿಕೆ ಹಾಕಿದಾಗ ದಡಾರದ ವೈರಾಣುಗಳ ವಿರುದ್ಧ ತಯಾರಾಗುವ ಆಂಟಿಬಾಡಿಗಳು ನಮ್ಮ ಮೇದೋಜೀರಕಾಂಗದ ಬೀಟಾ ಸೆಲ್‍ಗಳ ಮೇಲೆ ಧಾಳಿ ಮಾಡುತ್ತವೆ. ಇದು ಇನ್ಸುಲಿನ್‍ನ ತಯಾರಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಲಸಿಕೆಗಳ ಸಂಶೊಧನೆಯ ನಂತರ ಡಯಾಬಿಟಿಸ್‍ನ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಡಾ.ಮರ್ಕೊಲ ರ ಸಂಶೊಧನೆಗಳೂ ಧೃಢಪಡಿಸುತ್ತವೆ. ದಡಾರದ ಲಸಿಕೆ ಹಾಕಿಸಿಕೊಳ್ಳದಿರುವುದರಿಂದ ವಿಶೇಷ ಸಮಸ್ಯೆಗಳು ಉಂಟಾಗವು ಎಂದು ಡಾ.ಕಕ್ಕಿಲಾಯರವರೂ ಹೇಳಿದ್ದಾರೆ.( http://sampada.net/forum/17082)
ಲಸಿಕೆಗಳಿಂದ ಕ್ಯಾನ್ಸರ್ ಶತಶಃ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಕ್ಯಾನ್ಸರ್ ಬಂದಿರುವ ಉದಾಹರಣೆಗಳು ವೈದ್ಯಕಿಯ ಪುಟಗಳಲ್ಲಿ ದಾಖಲಾಗಿವೆ. ಉತ್ತಮ ಆಹಾರ ಮತ್ತು ಜೀವನಶೈಲಿಯಿಂದ ಕ್ಯಾನ್ಸರನ್ನು ತಡೆಗಟ್ಟಬಹುದು ಆದರೆ ಲಸಿಕೆಗಳು ಕ್ಯಾನ್ಸರ್‌ನ ಬೆಳವಣಿಗೆಗೆ ಅವಕಾಶ ಒದಗಿಸುವ ಸಾಧ್ಯತೆಗಳಿರುತ್ತವೆ. ಈ ಅಂಶಗಳನ್ನು ಡಾ.ವಿನ್ಸೆಂಟ್ ಹಾಗೂ ಡಾ. ಕ್ಲಾರ್ಕ್ ರ ಸಂಶೊಧನೆಗಳು ದೃಢಪಡಿಸಿವೆ[೪].
ಸಿಯಾಟಲ್ ಟೈಮ್ಸ್‍ನ ಲೇಖನವೊಂದರಲ್ಲಿ ಸಿಡುಬು(small pox) ಲಸಿಕೆ ಹಾಕಿಸದಿರುವುದಕ್ಕೆ ೨೦ ಕಾರಣಗಳು ಎಂಬ ಲೇಖನವು ಪ್ರಕಟವಾಗಿತ್ತು. ಇದರ ಪ್ರಕಾರ ಸಿಡುಬಿನ ಲಸಿಕೆ ಹಾಕಿಸುವುದರಿಂದ ಉಪಯೋಗಕ್ಕಿಂತ ಅಪಾಯಗಳೇ ಹೆಚ್ಚಿದ್ದು ಲಸಿಕೆ ತೆಗೆದುಕೊಳ್ಳಲಿರುವುದೇ ಲೇಸು ಎಂದು ಪ್ರತಿಪಾದಿಸಿದೆ. ಫಿಲಿಪ್ಪಿನ್ಸ್ ನ ಸಾಮೂಹಿಕ ಲಸಿಕೆಯ ಯಶಸ್ವಿ(ಸಿಡುಬಿನ ನಿಯಂತ್ರಣದ ಅಲ್ಲ) ಕಾರ್ಯಕ್ರಮದ ನಂತರ ಡಾ.ಲಿಯೊನ್ ಗ್ರಿಗೊರ್ಸ್ಕಿ "ನಾವೇ ರೋಗಗಳನ್ನು ಸೃಷ್ಟಿಸಿ ನಾವೇ ಅದನ್ನು ನಿವಾರಿಸಲು ಪ್ರಯತ್ನಿಸುತ್ತಿದ್ದೇವೆ. ಲಸಿಕೆಗಳನ್ನು ಈ ಪ್ರಮಾಣದಲ್ಲಿ ಉಪಯೋಗಿಸಿ ಕ್ಯಾನ್ಸರೀಕರಣ ಮತ್ತು ಮಿದುಳಿನ ನಿಶ್ಯಕ್ತಿಯ ಕಡೆಗೆ ಜನರನ್ನು ಎಳೆದೊಯ್ಯುತ್ತಿದ್ದೇವೆ." ಎಂದು ಉದ್ಗರಿಸಿದರು[೫]. ಫಿಲಿಪ್ಪಿನ್ಸ್ ನಲ್ಲಿ ಸಿಡುಬು ನಿಯಂತ್ರಣಕ್ಕೆ ಬಂದಿದ್ದು ಅಲ್ಲಿಯ ಅಧಿಕಾರಿಗಳು ಕೈಗೊಂಡ ಸ್ವಚ್ಚತೆ ಹಾಗೂ ಆರೋಗ್ಯವನ್ನು ಉಲ್ಬಣಗೊಳಿಸುವ ಕ್ರಮಗಳಿಂದಲೇ ಹೊರತು ಲಸಿಕೆಯಿಂದ ಅಲ್ಲ ಎಂಬುದು ಅವರ ಖಚಿತ ಅಭಿಪ್ರಾಯ. ಇದಲ್ಲದೆ ಸಿಡುಬಿನ ಬಗ್ಗೆ ಇರುವ ಅಂಕಿಅಂಶಗಳು ಸುಳ್ಳು ಹಾಗೂ ತಪ್ಪು ದಾರಿಗೆ ಎಳೆಯುವಂಥವು ಎಂದು ಡಾ.ಅಲ್ಫ಼್ರೆಡ್ ರಸೆಲ್ ವಾಲೆಸ್ ಪ್ರತಿಪಾದಿಸುತ್ತಾರೆ. ಲಸಿಕೆಯ ನಿಜವಾದ ಮರ್ಮಗಳನ್ನು ಅರಿಯಲು ಅಂಕಿಅಂಶ ತಜ್ಞರೇ ಸರಿಯಾದ ಮಾರ್ಗದರ್ಶನ ನೀಡಬಲ್ಲರೇ ಹೊರತು ವೈದ್ಯರುಗಳನ್ನು ಈ ವಿಷಯದಲ್ಲಿ ನಂಬುವ ಹಾಗಿಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ[೬].
ಸಮುದಾಯ ಆರೊಗ್ಯ ಸಾಮೂಹಿಕ ಆರೊಗ್ಯ ಇತ್ಯಾದಿಗಳನ್ನು ಕೇಳುತ್ತಲೇ ಇದ್ದೇನೆ. ಒಟ್ಟಾಗಿ ಎಲ್ಲರಿಗೂ ಲಸಿಕೆ ಚುಚ್ಚುವುದೇ ಸರ್ವಜನಿಕ ಆರೊಗ್ಯ ಎಂಬುದನ್ನು ಒಪ್ಪಲು ನನಗೆ ಸಾಧ್ಯವಾಗುತ್ತಿಲ್ಲ. ಸಾಮೂಹಿಕವಾಗಿ ಆರೋಗ್ಯವನ್ನು ಪ್ರತಿಪಾದಿಸಬೇಕಾದರೆ ಸ್ವಚ್ಛತೆ, ಪೌಷ್ಟಿಕ ಆಹಾರ, ವ್ಯಾಯಾಮ ಇಂಥವುಗಳ ಬಗ್ಗೆ ಗಮನ ಹರಿಸಬೇಕು ಎಂದು ನನಗನ್ನಿಸುತ್ತದೆ. ಸುಮ್ಮಸುಮ್ಮನೇ ಸಾಮುದಾಯ ಆರೋಗ್ಯದ ಹೆಸರಿನಲ್ಲಿ ಒಂದೇ ಸಾರಿಗೆ ಸಾವಿರಾರು ಮಕ್ಕಳ ಪೂರ್ವಾಪರ ಪರೀಕ್ಷೆಗಳಿಲ್ಲದೇ ಲಸಿಕೆಗಳನ್ನು ಸುರಿಯುವುದು ಎಷ್ಟರ ಮಟ್ಟಿಗೆ ಸಾಧು ಎಂಬುದು ನನ್ನ ಪ್ರಶ್ನೆ. ಪ್ರತಿ ಲಸಿಕೆಯನ್ನು ಕೊಡುವ ಮುಂಚೆ ಅಲರ್ಜಿ ಮತ್ತು ಆ ಮಗು ಲಸಿಕೆಯ ಅಡ್ಡ ಪರಿಣಾಮಗಳನ್ನು ತಡೆದುಕೊಳ್ಳುವಷ್ಟು ಸಮರ್ಥವೇ ಎಂದು ಪರೀಕ್ಷಿಸಬೇಕಾಗುತ್ತದೆ. ರಾಜಕೀಯ ದುರುದ್ದೇಶಗಳಿಂದ ಕೂಡಿದ ಇಂತಹ ಸಾಮೂಹಿಕ ಲಸಿಕೆಯ ಕಾರ್ಯಕ್ರಮಗಳಲ್ಲಿ ಯಾವ ಪರೀಕ್ಷೆಯನ್ನೂ ನಡೆಸಲಾಗುವುದಿಲ್ಲ. ಎಲ್ಲಾ ಮಕ್ಕಳು ಲಸಿಕೆಗಳಿಗೆ ಸಮಾನವಾಗಿ ಸ್ಪಂದಿಸುವುದಿಲ್ಲ. ಹಾಗಾಗಿ ಎಲ್ಲರಿಗೂ ಒಂದೇ ರೀತಿ ನೀಡುವ ಸಾಮೂಹಿಕ ಲಸಿಕೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದೂ ಪ್ರಶ್ನಿಸತಕ್ಕದ್ದೆ! ರೋಗಗಳ ಬಗ್ಗೆ ಜನರಲ್ಲಿರುವ ಅತಿಯಾದ ಭೀತಿಯ ಕಾರಣ ನಮ್ಮ ಮಕ್ಕಳು ರಾಜಕೀಯ ಷಡ್ಯಂತ್ರಗಳಿಗೆ ಬಲಿಯಾಗಬೇಕಾಗಿದೆ. ವೈದ್ಯರುಗಳಾದರೋ ಇವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಬದಲಾಗಿ ಇದು ರಾಜಕೀಯ ರಾಜಕಾರಣಿಗಳನ್ನು ಕೇಳಿ ಎಂದು ಕೈ ತಿರುವಿಬಿಡುತ್ತಾರೆ. ಸಣ್ಣ ಕಾರಣಕ್ಕೂ ಬ್ರುಫ಼ಿನ್ ನಂತಹ ಅಪಯಕಾರಿ ಗುಳಿಗೆಯನ್ನು ಬರೆಯುವುದು. ಅಯೋಡಿನ್ ಉಪ್ಪನ್ನು ಬಳಸಿ ಎಂದು ಒತ್ತಾಯಿಸುವುದು[೭] ಇವೆಲ್ಲಾ ವೈದ್ಯರುಗಳು ಬಹುರಾಷ್ಟ್ರೀಯ ಕಂಪನಿಗಳ ಕೈವಶವಾಗಿರುವುದನ್ನು ತೋರಿಸುತ್ತದೆ. ತಮ್ಮ ಜೇಬಿನ ಭಾರ ಹೆಚ್ಚಿಸಿಕೊಳ್ಳುವುದಕ್ಕಾಗಿ ನಮ್ಮ ಮಕ್ಕಳ ಜೀವನದ ಜೊತೆ ಆಡುವುದರ ಇಂತಹ ವೈದ್ಯರುಗಳಿಗೆ ಧಿಕ್ಕಾರವಿರಲಿ.
ಎಲ್ಲ ಕಡೆಯೂ ಹಣ ಪ್ರಾಣ ಹೀರುವ ಖೂಳ ತಿಗಣೆಗಳೇ ತುಂಬಿರುವಾಗ ನಮ್ಮ ಮಕ್ಕಳನ್ನು ಬಹುರಾಷ್ಟ್ರೀಯ ಕಂಪನಿಗಳ ದುಷ್ಟ ಜಾಲದಿಂದ ಪಾರು ಮಾಡುವುದು ನಮ್ಮ ಜವಾಬ್ದಾರಿ. ನಮ್ಮ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ತೊಲಗುವವರೆಗೂ ನಮ್ಮನ್ನು ರಕ್ಷಿಸುವುದು ಸ್ವತಃ ನಮ್ಮ ಅರಿವು! ಹಿಂದೆ ಮುಂದೆ ವಿಚಾರ ಮಾಡದೇ ವೈದ್ಯರು ಹೇಳಿದರೆಂಬ ಕಾರಣಕ್ಕೆ ಕಂಡ ಕಂಡ ಲಸಿಕೆಗಳನ್ನೆಲ್ಲಾ ಹಾಕಿಸಿಕೊಳ್ಳುವುದು ದೂರಗಾಮಿ ದುಷ್ಪರಿಣಾಮಗಳನ್ನು ಉಂಟುಮಾಡಬಲ್ಲದು.


ಆಕರಗಳು:

1. http://www.vaccinationdebate.com/web1.html

೨.http://www.whale.to/m/statistics.

3.http://www.whale.to/vaccine/mckinlay.pdf

೪..http://www.mercola.com/article/vaccines/immune_suppression.html

೫.http://articles.mercola.com/sites/articles/archive/2008/01/02/was-smallpox-vaccine-really-a-great-success.aspx

೬. http://www.whale.to/vaccine/wallace/book.html

೭. http://www.petitiononline.com/pil0001/petition.html

ಲಸಿಕೆ ಎಂಬ ಮಹಾವಿಶ -೨

೧೯೧೧ ರಿಂದ ೧೯೩೫ರ ಅವಧಿಯಲ್ಲಿ ಅಮೇರಿಕಾದಲ್ಲಿ ಸಂಕ್ರಾಮಿಕ ರೋಗಗಳ ಕಾರಣ ಅತಿ ಹೆಚ್ಚು ಮಕ್ಕಳು ಸತ್ತದ್ದು ಡಿಪ್ತೀರಿಯಾ, ನಾಯಿಕೆಮ್ಮು, ಸ್ಕಾರ್ಲೆಟ್ ಜ್ವರ ಮತ್ತು ದಢಾರದಿಂದಾಗಿ. ಆದರೆ ೧೯೪೫ರ ವೇಳೆಗೆ ಸಾವಿನ ಸಂಖ್ಯೆ ಶೇ.೯೫ರಷ್ಟು ಕಡಿಮೆಯಾಗಿ ಹೋಗಿತ್ತು! (ಆಕರ: ಡುಬ್ಲಿನ್.ಎಲ್. ಮೆಟ್ರೋಪಾಲಿಟನ್ ಲೈಫ಼್ ಇನ್ಶುರೆನ್ಸ್ ಕಂಪನಿ, ೧೯೪೮, "೧೯೩೫-೪೫ ರಲ್ಲಿ ಆರೋಗ್ಯದ ವೃದ್ಧಿಯ ವರದಿ".) ರೋಗಿಗಳ ಸಂಖ್ಯೆಗಳ ಇಳಿಮುಖವಾಗಲು ಒಳಚರಂಡಿ ಮತ್ತು ಸ್ವಚ್ಛತೆಯಲ್ಲಿ ಸುಧಾರಣೆಗಳನ್ನು ಕಂಡಿದ್ದು ಪ್ರಮುಖ ಕಾರಣಗಳೆಂದು ಹೇಳಲಾಗುತ್ತದೆ. ("ಮರ್ಬಿಡಿಟಿ ಅಂಡ್ ಮಾರ್ಟಾಲಿಟಿ ವೀಕ್ಲಿ’ ಸಾಪ್ತಾಹಿಕ ವರದಿ. ಜು.೧೯೯೯). ಲಸಿಕೆ ಹಾಕಲು ಶುರು ಮಾಡುವ ಮುಂಚೆಯೇ ರೋಗದ ಸಂಖ್ಯೆಯಲ್ಲಿ ಸಾಕಷ್ಟು ಇಳಿಮುಖವಾಗಿರುವುದು ಅಂಕಿ ಅಂಶಗಳನ್ನು ಗಮನಿಸಿದರೆ ಗೊತ್ತಾಗುತ್ತದೆ.
ಡಾ.ಸೈಡನ್‍ಹ್ಯಾಮ್ ರವರ ಪ್ರಕಾರ ವೈದ್ಯರು ಹಾಗೂ ದಾದಿಯರ ಕುತಂತ್ರವಿಲ್ಲದಿದ್ದರೆ ಸಿಡುಬು ಅಪಾಯರಹಿತ ಹಾಗೂ ಲಘು ರೋಗವಾಗಿದೆ. ಸಿಡುಬು ದೇಹದಲ್ಲಿನ ವಿಷವನ್ನು ಬೆವರು, ಗುಳ್ಳೆಗಳ ಕೀವು, ಮೂತ್ರದ ಮೂಲಕ ವಿಷವನ್ನು ಹೊರಹಾಕುತ್ತದೆ. ಆದ್ದರಿಂದಲೇ ಸಿಡುಬು ಬಂದವರಿಗೆ ಹೆಚ್ಚಾಗಿ ನೀರಡಿಕೆಯಾಗುವುದು! ಸಿಡುಬಿನಿಂದ ದೂರವಿರುವ ಮಾರ್ಗವೆಂದರೆ ಉತ್ತಮ ಆಹಾರ, ವಿಹಾರ, ಶುಚಿತ್ವ!
ಸಾಮೂಹಿಕ ಲಸಿಕೆ ಹಾಕುವ ಕಾರ್ಯಕ್ರಮಗಳ ಔಚಿತ್ಯದ ಹಿಂದೆ ಒಂದು ತರ್ಕಬದ್ಧವಾದ ಪ್ರಶ್ನೆಯಿದೆ. ವಿಶ್ವದ ಒಂದೊಂದು ಭಾಗದಲ್ಲೂ ಒಂದೊಂದು ರೀತಿಯ ಹವಾಮಾನ, ಆಹಾರ ಪದ್ಧತಿ, ವಾತಾವರಣ ಇರುತ್ತವೆ. ಇವೆಲ್ಲವನ್ನೂ ನಿರ್ಲಕ್ಷಿಸಿ ಎಲ್ಲರಿಗೂ ಒಂದೇ ರೀತಿಯ ಲಸಿಕೆ ಹಾಕುವುದು ಸರಿಯೇ ? ಸಾಮೂಹಿಕ ಲಸಿಕೆ ಹಾಕುವ ಮುಂಚೆ ಆಯಾ ಪ್ರದೇಶದಲ್ಲಿ ಆಯಾ ವಾತಾವರಣಕ್ಕೆ ಪರೀಕ್ಷೆ ಮಾಡಲಾಗಿರುತ್ತದೆಯೇ ? ಜೊತೆಗೆ ಕೆಲವು ಲಕ್ಷಣಗಳಿದ್ದರೆ ಆ ಲಕ್ಷಣಗಳಿಗೆ ಹೊಂದದಂತಹ ಲಸಿಕೆ ಕೊಡಬಾರದು ಎಂಬುದು ಅಮೇರಿಕಾ ಸೆಂಟರ್ ಫ಼ಾರ್ ಡಿಸೀಸ್ ಕಂಟ್ರೋಲ್ ನ ನಿಯಮ. ಸಾಮೂಹಿಕ ಲಸಿಕೆ ಕೊಡುವಾಗ ಈ ನಿಯಮ ಸಹಜವಾಗಿಯೇ ಗಾಳಿಯಲ್ಲಿ ತೂರಿಹೋಗುತ್ತದೆ. ಈ ಕಾರಣದಿಂದಾದರೂ ಕನಿಷ್ಟ ಪಕ್ಷ ಸಾಮೂಹಿಕ ಲಸಿಕೆಯಿಂದಾದರೂ ದೂರವಿರುವುದು ಉತ್ತಮ ಎನ್ನಿಸುತ್ತದೆ.
ವ್ಯಾಕ್ಸಿನ್‍ಗಳ ಹಾಗೂ ಆರೋಗ್ಯಕ್ಕೆ ಹಾನಿಕಾರಕವಾದ ಔಷಧಗಳನ್ನು ಹಂಚುವುದರಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಕೈವಾಡವಿರುವುದು ಹಾಗೂ ಇದಕ್ಕೆ ವೈದ್ಯರುಗಳ (ಎಲ್ಲಾ ವೈದ್ಯರುಗಳದಲ್ಲ), ಸರ್ಕಾರದ ಪ್ರತಿನಿಧಿಗಳ ಸಹಕಾರವಿರುವುದನ್ನು ನಾವು ಶಂಕಿಸಬಹುದು. ಮೊನ್ನೆ ಗೆಳೆಯ ಷಡಕ್ಷರಮೂರ್ತಿಯವರು ಜೆನೆರಿಕ್ ಔಷಧಿಗಳು ಮತ್ತು ಆರ್.ಎಂ.ಜಿ ವೈದ್ಯರುಗಳು ಕೊಡುವ ಔಷಧಿಗಳ ಬಗ್ಗೆ ವಿವರಿಸುತಿದ್ದರು. ಇದರ ಬಗ್ಗೆಯೂ ಅಧ್ಯಯನ ನಡೆಸುತ್ತಿದ್ದೆನೆ. ಅನೇಕ ದೇಶಗಳಲ್ಲಿ ನಿರ್ಬಂಧಿಸಲಾದ ಔಷಧಿಗಳು ಅಥವಾ ಔಷಧಿ ತಯಾರಿಕೆಯ ರಾಸಾಯನಿಕಗಳು ನಮ್ಮ ದೇಶದಲ್ಲಿ (ಉದಾ: ಇರ್ಲೋಪೆನ್, ಮೈಗ್ರಿಲ್, ಸಿಪ್ಟೊಮೆಟ ಇತ್ಯಾದಿ) ಬಿಕರಿಯಾಗುತ್ತಿವೆ. ಇದರಲ್ಲಿ ಕೆಲವನ್ನು ವೈದ್ಯರುಗಳ ಸಲಹೆ ಇಲ್ಲದೆ ತೆಗೆದುಕೊಳ್ಳಬಹುದು( ಉದಾ: ಮಾಲಾ-ಡಿ. ಇದು ಬೇರೆ ದೇಶದಲ್ಲಿ ಬೇರೆ ಹೆಸರಿನಿಂದ ಮಾರಾಟವಾಗುತ್ತಿತ್ತು!). ದುರಂತವೆಂದರೆ ಬಾಂಗ್ಲಾದೇಶ, ನೇಪಾಳದಂತಹ ರಾಷ್ಟ್ರಗಳೂ ದಿಟ್ಟತನದಿಂದ ನಿರ್ಬಂಧಿಸಿದ ರೆಸ್ಟಿಲ್, ಕಾಮ್‍ಸ್ಲಿಪ್ ನಂತಹ ಗುಳಿಗೆಗಳು ಭಾರತದಲ್ಲಿ ಬಳಕೆಯಲ್ಲಿವೆ! ಏಡ್ಸ್ ಔಷಧಿ, ಗರ್ಭನಿರೋಧಕ, ಕಾಂಡೊಮ್ ಬಿಕರಿಯಲ್ಲೂ ಕೆಲವು ಕುತಂತ್ರಗಳನ್ನು ತಳ್ಳಿ ಹಾಕುವಂತಿಲ್ಲ. ಪ್ರಾಸೆಸ್ ಪೇಟೆಂಟ್ ಬಿಟ್ಟು ಪ್ರಾಡಕ್ಟ್ ಪೇಟೆಂಟ್ ಅನ್ನು ಅಪ್ಪಿಕೊಂಡದ್ದು ಭಾರತ ಮಾಡಿದ ಅತ್ಯಂತ ಘೋರ ತಪ್ಪುಗಳಲ್ಲೊಂದು. ಇದು ನೇರವಾಗಿ ಔಷಧಿಗಳ ಏಕಸಾಮ್ಯವನ್ನು ದೊಡ್ಡ ದೊಡ್ಡ ಕಂಪನಿಗಳ ಕೈಯಲ್ಲಿ ಇಡುತ್ತದೆ. ಇದಲ್ಲದೇ ಬೇರೆ ಬೇರೆ ದೇಶದಲ್ಲಿ ಔಷಧಿಗಳು ಬೇರೆಬೇರೆ ಹೆಸರಿನಲ್ಲಿರುವುದರಿಂದ ಜನರಿರಲಿ ಡಾಕ್ಟರ್ ಗಳೇ ದಾರಿತಪ್ಪುವ ಹಾಗಾಗುತ್ತದೆ. ಆದ್ದರಿಂದ ಕಂಟೆಂಟ್‍ಗಳ ಅಧ್ಯಯನ ಮಾಡಬೇಕಾಗುತ್ತದೆ.
ನನ್ನ ಸ್ನೇಹಿತ ಸಂಪತ್ ಗೆ ಅಪಘಾತವಾಗಿ ಕಾಲು ಕೈಗಳಲ್ಲಿ ಆಳವಾದ ಗಾಯಗಳಾಗಿದ್ದವು. ವೈದ್ಯರು ಆಂಟಿ ಟೆಟಾನಸ್ ಸೂಜಿ ಚುಚ್ಚಿಸಿಕೊಳ್ಳಲು ಸಲಹೆ ಮಾಡಿದರು. ನಾನು ಲಸಿಕೆ ತರಲು ಮುಂದಾದಾಗ ನನ್ನನ್ನು ತಡೆದು ಸಂಪತ್ ಹೇಳಿದರು "ಲೋ ನಿಂಗೆ ತಲೆ ಕೆಟ್ಟಿದೆಯೇನೋ? ಏನೂ ಆಗಲ್ಲ ಹೆದರ್ಕೊಬೇಡ. ಗಾಳೀಲಿ ಬೇರೆ ಬೇರೆ ರೋಗ ತರೋ ನೂರಾರು ರೋಗಾಣುಗಳು ತೇಲಾಡ್ತಿರ್ತವೆ. ಯಾವುದ್ಯಾವುದಕ್ಕೆ ಅಂತ ಸೂಜಿ ಚುಚ್ಚಿಸ್ಕೊತಿಯ? ಮೈ ಎಲ್ಲಾ ತೂತಾಗಿ ಹೋಗುತ್ತೆ ಅಷ್ಟೇ!!". ಸ್ವಲ್ಪವೇ ಸಮಯದಲ್ಲಿ ಸಂಪತ್ ಚೇತರಿಸಿಕೊಂಡರು. ಈಗ ಸುಖವಾಗಿ ಬದುಕುತ್ತಿದ್ದಾರೆ. ಅಂದ ಹಾಗೆ ಸಂಪತ್ ಸ್ನಾತಕೋತ್ತರ ಬಯೋಮೆಡಿಕಲ್ ಇನ್ಸ್ಟ್ರುಮೆಂಟೇಶನ್‍ನಲ್ಲಿ ಬಂಗಾರದ ಪದವಿ ಪಡೆದಿರುವವರು!