ಸೋಮವಾರ, ಅಕ್ಟೋಬರ್ 12, 2009

ಸಾವಯವ ಮೋಸ!

ಇತ್ತೀಚೆಗೆ ರಸಾಯನಿಕ ಗೊಬ್ಬರಗಳ ಬಗ್ಗೆ ವಿರೋಧ ಮೂಡಿ ಎಲ್ಲರೂ ಸಾವಯವ ಪದ್ಧತಿಯಲ್ಲಿ ಬೆಳೆದ ಆಹಾರ ಧಾನ್ಯಗಳ ಕಡೆಗೆ ಮನಸ್ಸನ್ನು ಹೊರಳಿಸುತ್ತಿದ್ದಾರೆ. ಯಾವುದೇ ರಂಗದಲ್ಲಾಗಲಿ ಬೇಡಿಕೆ ಏಳುತ್ತಿದ್ದಂತೆ ಮಧ್ಯವರ್ತಿಗಳು, ವ್ಯಾಪಾರಿಗಳು ಬಂಡವಾಳ ಹಾಕಿ ಲಾಭ ತೆಗೆದುಕೊಳ್ಳಲು ಹವಣಿಸುತ್ತಾರೆ. ಇದರಂತೆಯೇ ಅತ್ಯಂತ ದುಬಾರಿಯಾದ ಬೆಲೆಗಳಿಟ್ಟು ಸಾವಯವ ಆಹಾರವನ್ನು ಮಾರಲಾಗುತ್ತಿದೆ. ಉಳ್ಳವರಿಗೆ ಸಾವಯವ ಆಹಾರವನ್ನು ಪೂರೈಸಲು ಅನೇಕ ಸಂಸ್ಥೆಗಳು ಹುಟ್ಟಿಕೊಂಡಿವೆ.
ಸಾವಯ್ವ ಆಹಾರದ ಬೇಡಿಕೆ ಅದರಲ್ಲೂ ದುಬಾರಿ ಬೆಲೆ ಕೊಟ್ಟು ಆರೋಗ್ಯವನ್ನು ಖರೀದಿಸುವ ಖಯಾಲಿಯಿರುವ ಸಿರಿವಂತರ ಜೇಬಿಗೆ ಕೊಕ್ಕೆ ಹಾಕುವ ಈ ಸಂಸ್ಥೆಗಳ ಬಗ್ಗೆ ಕೆಲವು ವಿಷಯಗಳನ್ನು ಹೇಳಬೇಕಾಗಿದೆ.
ಮೊದಲನೆಯದಾಗಿ ಈ ಸಂಸ್ಥೆಗಳು ಮಾರುವ ಆಹಾರ ಸಾವಯವ ಪದ್ಧತಿಯಿಂದಲೇ ಬೆಳೆದದ್ದೆಂದು ಹೇಳಲು ಯಾವುದೇ ಆಧಾರಗಳಿಲ್ಲ. ಆಹಾರಧಾನ್ಯಗಳ ಮೇಲೆ ಯಾವುದಾದರೂ ರಾಸಾಯನಿಕಗಳು ಕೂತಿವೆಯೇ ಎಂಬುದನ್ನು ಕಂಡುಹಿಡಿಯಲು ಯಾವುದೇ ಪದ್ಧತಿಯಾಗಲೀ ಉಪಕರಣಗಳಗಲೀ ಇಲ್ಲ. ಇದ್ದರೂ ಇವು ಸಾಮಾನ್ಯರ ಕೈಗೆಟಕುವುದು ಕಡಿಮೆ. ಒಮ್ಮೆ ಕೃಷಿ ಅಧಿಕಾರಿಗಳು ಬಂದು ನೋಡಿ ಸರ್ಟಿಫಿಕೇಟ್ ಕೊಟ್ಟು ಹೋದರಾಯಿತು. ಅದೇ ಸರ್ಟಿಫಿಕೇಟನ್ನು ಹಿಡಿದು ತಮ್ಮಲ್ಲಿರುವುದೆಲ್ಲಾ ಸಾವಯವ ಎಂದು ಬಿಂಬಿಸಲಾಗುತ್ತದೆ. ಒಮ್ಮೆ ಬಂದು ಹೋದ ಅಧಿಕಾರಿಗಳು ಮತ್ತೆ ಯಾವಾಗ ಬರುವರೋ ತಿಳಿಯದು. ಅಧಿಕಾರಿಗಳು ಬಂದಾಗ ಸಾವಯವ ಧಾನ್ಯವನ್ನೇ ಇಟ್ಟು ನಂತರದಲ್ಲಿ ರಸಾಯನಿಕಗಳನ್ನುಳ್ಳ ಧಾನ್ಯವನ್ನಿಟ್ಟರೆ ಯಾರಿಗೂ ಅರಿವೂ ಆಗುವುದಿಲ್ಲ.
ಎರಡನೆಯದಾಗಿ ಇವು ಭಯಂಕರ ದುಬಾರಿ. ಪೇಟೆಯಲ್ಲಿ ಸಿಗುವ ಪದಾರ್ಥಗಳಿಗಿಂತ ಇವು ಎರಡರಿಂದ ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಲ್ಪಡುತ್ತವೆ. ಈ ಹೆಚ್ಚಿನ ಬೆಲೆಗೆ ಕಾರಣವೇನೆಂದು ಕೇಳಿದರೆ ಬೇಡಿಕೆ ಹೆಚ್ಚಿದ್ದು ಸರಬರಾಜು ಕಡಿಮೆ ಇರುವುದರಿಂದ ಬೆಲೆ ಹೆಚ್ಚು ಎನ್ನುತ್ತಾರೆ ಇನ್ನೊಂದು ಕಾರಣ ರಸಾಯನಿಕದಿಂದ ಸಾವಯವಕ್ಕೆ ತಿರುಗಿದ ರೈತರು ಎರಡು ಮೂರು ವರ್ಷ ನಷ್ಟ ಅನುಭವಿಸಬೇಕಾಗುತ್ತದೆ ಅದನ್ನು ಗ್ರಾಹಕರಾದ ನಾವೇ ಭರಿಸಬೇಕು ಎಂದೂ ಹೇಳುತ್ತಾರೆ. ರೈತನಿಗೆ ಹೋಗುವುದಾದರೆ ಹೆಚ್ಚಿನ ಬೆಲೆ ನೀಡಲು ಯಾವುದೇ ತಕರಾರಿಲ್ಲ. ಆದರೆ ರೈತರಿಂದ ಕೊಂಡು ತರುವ ಬೆಲೆಗೂ ಇವರು ಕೊಡುತ್ತಿರ್ವ ಬೆಲೆಗೂ ಬಹಳ ವ್ಯತ್ಯಾಸವಿದೆ. ಬೇರೆ ಧಾನ್ಯಗಳಿಗಿಂತ ಸಾವಯವ ಧಾನ್ಯಗಳನ್ನು ರೈತರು ಐದರಿಂಡ ಹತ್ತು ರೂಪಾಯಿಯಷ್ಟು ಹೆಚ್ಚಿನ ಬೆಲೆಗೆ ಮಾರುತ್ತಾರೆ. ಆದರೆ ಗ್ರಾಹಕನ ಬಳಿ ಬರುವಷ್ಟರಲ್ಲಿ ಆ ಬೆಲೆ ದುಪ್ಪಟ್ಟಾಗಿರುತ್ತದೆ.
ಸಾವಯವ ಮಾದರಿಯಲ್ಲಿ ದೇಸೀ ಆಕಳ ತುಪ್ಪವನ್ನೂ ಮಾರಲಾಗುತ್ತಿದೆ. ಈ ತುಪ್ಪದ ಬೆಲೆ ನಾನೂರು ಗ್ರಾಮ್‍ಗೆ ಮುನ್ನೂರು ರೂಪಾಯಿಗಳು! ಇದೇ ಶುದ್ಧ ತುಪ್ಪ ನೂರೈವತ್ತು ರೂಪಾಯಿಗಳಿಗೆ ರೈತನಲ್ಲಿ ದೊರಕುತ್ತದೆ. ಇದೇ ರೀತಿಯ ಮೋಸ ಸೇಂಗಾ ಎಣ್ಣೆಯ, ವರ್ಜಿನ್ ತೆಂಗಿನೆಣ್ಣೆಗಳ ವಿಷಯದಲ್ಲೂ ಆಗುತ್ತಿದೆ.
ಲಾಲ್‍ಭಾಗ್‍ನಲ್ಲಿರುವ ಜೈವಿಕ್ ಸೊಸೈಟಿಯಲ್ಲಿ ವಾರಕ್ಕೊಮ್ಮೆ ತರಕಾರಿಗಳ ಮಾರಾಟ ಇರುತ್ತದೆ. ಈ ತರಕಾರಿಗಳನ್ನು ಗಾತ್ರದಲ್ಲಿ ದೊಡ್ಡದಾದ ಆಕರ್ಷಕವಾದವುಗಳನ್ನು ಹಾಪ್‍ಕಾಮ್ಸ್‍ನಿಂದ ಆರಿಸಿ ತರುತ್ತಾರೇನೋ ಎಂಬ ಅನುಮಾನ ನನಗಿದೆ. ಏಕೆಂದರೆ ಅನೇಕ ತರಕಾರಿಗಳು ಹೈಬ್ರಿಡ್ ತಳಿಯವುಗಳಾಗಿರುತ್ತವೆ. ಹೈಬ್ರಿಡ್ ತಳಿಗಳನ್ನು ರಾಸಾಯನಿಕಗಳಿಲ್ಲದೇ ಬೆಳೆಯುವುದು ಸಾಧ್ಯವೇ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಪ್‍ಕಾಮ್ಸ್ ಹಣ್ಣುಗಳಿಗೂ ಇಲ್ಲಿಯ ಹಣ್ಣುಗಳಿಗೂ ಅನೇಕ ಸಾಮ್ಯತೆಗಳಿವೆ. ಉದಾಹರಣೆಗೆ ಜವಾರಿ ಹಣ್ಣುಗಳಿಗಿಂತ ಹೆಚ್ಚಿನ ಗಾತ್ರ ಮತ್ತು ಬಣ್ಣ. ಜವಾರಿಗಿಂತ ಬೇರೆ ರುಚಿ ಇತ್ಯಾದಿ.
ಜನರಲ್ಲಿ ರಾಸಾಯನಿಕಗಳ ಬಗ್ಗೆ ಹುಟ್ಟಿರುವ ತಿರಸ್ಕಾರಗಳನ್ನು ಕಾಸು ಮಾಡಿಕೊಳ್ಳುವ ಉದ್ದೇಶದಿಂದ ಜನರನ್ನು ಮೋಸಗೊಳಿಸಲಾಗುತ್ತಿದೆ. ಧಾನ್ಯಗಳ ವಿಷಯದಲ್ಲಿ ಸಲ್ಪ ಕಷ್ಟವಾದರೂ ತರಕಾರಿ ಮತ್ತು ಹಣುಗಳನ್ನು ಗುರುತಿಸುವುದು ಸ್ವಲ್ಪ ಸುಲಭ. ದುಬಾರಿ ಬೆಲೆ ಕೊಟ್ಟು ಅದೇ ಪೇಟೆಯಲ್ಲಿ ಸಿಗುವ ಪದಾರ್ಥಗಳನ್ನು ಖರೀದಿಸುವ ಮುನ್ನ ಎಚ್ಚರಿಕೆ ವಹಿಸುವುದು ಒಳಿತು